ಚೆಕೊಸ್ಲೊವಾಕ್ ಸಾಹಿತ್ಯ

ಈಗ ಚೆಕೊಸ್ಲೊವಾಕಿಯ ಎಂದು ಪ್ರಚಲಿತವಿರುವ ಪ್ರದೇಶದಲ್ಲಿ ದೇಶೀಯ ಭಾಷೆಯಲ್ಲಿ ಬರೆಹ ಪ್ರಾರಂಭವಾದದ್ದು ಕ್ರಿ..ಶ. 863ರಲ್ಲಿ. ಆ ವರ್ಷ ಗ್ರೇಟ್ ಮೊರೇವಿಯದ ರಾಜಕುಮಾರ ರಾಸ್ಟಿಸ್ಲಾವ್ ಅಂದು ಪ್ರಬಲವಾಗಿದ್ದ ಜರ್ಮನ್ ಪ್ರಭಾವವನ್ನು ಎದುರಿಸಲು ಪೂರ್ವ ಬೈಜಾóಂಟಿಯಮ್‍ನ ನೆರವನ್ನು ಬಯಸಿದ. ಅವನ ಅಪೇಕ್ಷೆಯ ಮೇರೆಗೆ ಬೈeóÁಂಟಿಯಮ್ ಚಕ್ರವರ್ತಿ ಮೂರನೆಯ ಮೈಕೇಲ್ ಒಂದು ಧರ್ಮಪ್ರಚಾರ ಮಂಡಳಿಯನ್ನು ಕಳುಹಿಸಿಕೊಟ್ಟ. ಆ ಮಂಡಳಿಯ ನೇತೃತ್ವ ವಹಿಸಿದವರು ಉದ್ದಾಮ ವಿದ್ವಾಂಸನೂ ರಾಯಭಾರಿಯೂ ಆಗಿದ್ದ ಕಾನ್‍ಸ್ಟೆಂಟೀನ್ ಮತ್ತು ಅವನ ಸಹೋದರ ಮೆಥೋಡಿಯಸ್. ಇವರಿಬ್ಬರೂ ಸೇರಿ ಕ್ರಿಸ್ತಧರ್ಮಗ್ರಂಥಗಳ ಬಹುಭಾಗವನ್ನೂ ಕ್ರಿಸ್ತಧರ್ಮ ಪೂಜಾವಿಧಿಗೆ ಸಂಬಂಧಿಸಿದ ಕೆಲವು ಭಾಗಗಳನ್ನೂ ಸ್ಲೊವ್ಯಾನಿಕ್ ದೇಶಭಾಷೆಗೆ ತುರ್ಜುಮೆ ಮಾಡಿದರು. ಈ ಸಹೋದರರಿಬ್ಬರ ಜೀವನಚರಿತ್ರೆಗಳು ಪ್ರಸಿದ್ಧಿ ಪಡೆದಿವೆ. ಸೇಂಟ್ ವೆನ್‍ಸೆಸ್‍ಲಾಸ್ ಮತ್ತು ಅವನ ಅಜ್ಜಿಲುಡ್‍ಮಿಲರನ್ನು ಕುರಿತ ಆಖ್ಯಾಯಿಕೆಗಳು ಹತ್ತನೆಯ ಶತಮಾನದ ಇನ್ನೊಂದು ಕೃತಿ. ಅನಂತರ ಲ್ಯಾಟಿನ್‍ನಲ್ಲಿ ರಚಿತವಾದ ಸಾಧು ಸಂತರ ಜೀವನಚರಿತ್ರೆಗಳಿಂದ ಬೊಹೀಮಿಯ ರಾಜ್ಯದ ಆರಂಭದೆಸೆಯಲ್ಲಿ ಸಾಹಿತ್ಯ ಚಟುವಟಿಕೆಗಳು ಭರವಾಗಿ ಸಾಗಿತ್ತೆಂದು ಊಹಿಸಬಹುದು.

ಚೆಕ್ ಭಾಷೆಯಲ್ಲಿ ಲಭ್ಯವಾಗಿರುವ ಅತ್ಯಂತ ಹಳೆಯ ಗ್ರಂಥಗಳು 13ನೆಯ ಶತಮಾನದ ಉತ್ತರಾರ್ಧಕ್ಕೆ ಸೇರಿದವು. ಅಂದಿನ ಸ್ತೋತ್ರಗೀತೆಗಳು ನಿರಾಡಂಬರ ಶೈಲಿಯ ಕವನರೂಪದಲ್ಲಿದ್ದುವು. ಇವನ್ನು ಬಿಟ್ಟರೆ 13ನೆಯ ಶತಮಾನ ಮುಗಿಯುವ ಹೊತ್ತಿಗೆ ಚೆಕ್ ಭಾಷೆಯಲ್ಲಿ ಮಹತ್ವಪೂರಿತವಾದ ಯಾವುದೇ ಸಾಹಿತ್ಯ ನಿರ್ಮಾಣದ ಸ್ಪಷ್ಟ ನಿದರ್ಶನವಿಲ್ಲ.

14ನೆಯ ಶತಮಾನದಲ್ಲಿ ಮಹಾಕಾವ್ಯ, ಭಾವಗೀತೆ, ನಾಟಕ, ಗದ್ಯ ಕ್ಷೇತ್ರಗಳಲ್ಲಿ ಸಮೃದ್ಧವಾದ ಸಾಹಿತ್ಯ ಸೃಷ್ಟಿಯಾಯಿತು. ಆ ಶತಮಾನದ ಮೊದಲ ವರ್ಷಗಳಲ್ಲಿ ಲೆಜೆಂಡ್ಸ್ ಎಂಬ ಕವನ ಗುಚ್ಛದಲ್ಲಿ (ಗ್ರಂಥಕರ್ತ ಒಬ್ಬನೋ ಒಂದು ಗುಂಪೋ ಗೊತ್ತಿಲ್ಲ) ಕಾವ್ಯತಂತ್ರದ ಬಗ್ಗೆ ತಕ್ಕಮಟ್ಟಿನ ಜಾಣ್ಮೆ ಕಂಡುಬರುತ್ತದೆ. ಅಲೆಕ್ಸಾಂಡ್ರೀಸ್ ಎಂಬ ಕೃತಿ ಅಲೆಕ್ಸಾಂಡರ್ ಮಹಾಶಯನ ಜೀವನಚರಿತ್ರೆಯನ್ನು ವಸ್ತುವಾಗುಳ್ಳ ಲೌಕಿಕ ಮಹಾಕಾವ್ಯ. ಈ ಕಾವ್ಯ ಅಷ್ಟಮಾತ್ರೆಗಳ ದ್ವಿಪದಿಗಳಲ್ಲಿದೆ. ಡಾಲಿಮಿಲ್ ಕ್ರಾನಿಕಲ್ ಎಂಬ ಇನ್ನೊಂದು ಕಾವ್ಯ ಚೆಕ್ ಜನರ ಇತಿಹಾಸವನ್ನು ನೇರ ಸ್ಪಷ್ಟ ಶೈಲಿಯಲ್ಲಿ ಬಣ್ಣಿಸುತ್ತದೆ. ಚಕ್ರವರ್ತಿ ನಾಲ್ಕನೆಯ ಚಾರ್ಲ್‍ಸ್ (1346-78) ವಿದ್ಯಾಪ್ರಸಾರಕ್ಕೂ ಸಾಹಿತ್ಯಕ್ಕೂ ನೀಡಿದ ಪ್ರೋತ್ಸಾಹದಿಂದ ಬೊಹೀಮಿಯದಲ್ಲಿ ಚೆಕ್ ಮತ್ತು ಜರ್ಮನ್ ಭಾಷೆಗಳೆರಡೂ ಅಭಿವೃದ್ಧಿ ಹೊಂದಿದವು. ಅವನು ಲ್ಯಾಟಿನ್ ಭಾಷೆಯಲ್ಲಿ ಬರೆದ ಆತ್ಮಕಥೆ ಚೆಕ್ ಭಾಷೆಗೆ ಅನುವಾದಗೊಂಡಿತು. ಲೆಟೆಂಡ್ ಆಫ್ ಸೇಂಟ್ ಕ್ಯಾತರೀನ್ ಎಂಬ ಕಾವ್ಯ ಆ ಶತಮಾನದ ಅತ್ಯುನ್ನತ ಸಾಧನೆಯೆಂದು ಪರಿಗಣಿಸಲಾಗಿದೆ.
ಧರ್ಮಸ್ತೋತ್ರಗಳಲ್ಲದೆ ಲೌಕಿಕ ವಿಷಯಗಳನ್ನೊಳಗೊಂಡ ಭಾವಗೀತೆಗಳೂ ರಚಿತವಾದುವು. ಸಾಹಿತ್ಯದ ಪ್ರಭಾವದೊಡನೆ ಜಾನಪದ ಅಂಶಗಳೂ ಸೇರಿಕೊಂಡಿವೆ. ದೇಶೀಯ ಭಾಷೆಯಲ್ಲಿ ನಾಟಕವೂ ರಚಿತವಾಗಿತ್ತೆಂಬುದಕ್ಕೆ ದಿ ಕ್ವ್ಯಾಕ್ ಎಂಬ ಹಾಸ್ಯ ನಾಟಕದ ನಿದರ್ಶನ ದೊರೆತಿದೆ. ವೀರಯುಗದ ಸಾಹಸಗಳನ್ನು ವಸ್ತುವಾಗುಳ್ಳ ಜರ್ಮನ್ ಪದ್ಯಗಳನ್ನು ಆಧರಿಸಿ ಬರೆದ ಚೆಕ್ ಕವನಗಳು ಅನೇಕವಿವೆ. ಉದಾಹರಣೆಗೆ ಟ್ರಿ ಸ್ಟಾನ್, ಟಾಂಡನಿಯಸ್ ಮತ್ತು ಪ್ಲೊರಿಬೆಲ್ಲ.

1350ರಿಂದ ಗದ್ಯಕ್ಷೇತ್ರದಲ್ಲೂ ಹೆಚ್ಚಿನ ಕೆಲಸ ನಡೆಯಿತು. ಸಂತರ ಜೀವನಗಳು ಉದಂತಗಳು ಸ್ವಾರಸ್ಯ ಪ್ರಸಂಗಗಳ ನಿರೂಪಣೆಗಳು, ಮಧ್ಯಯುಗದ ಜನಪ್ರಿಯ ಕತೆಗಳಿಂದ ಆಯ್ದ ಪ್ರಕರಣಗಳು ಮುಂತಾದುವು ರಚಿತವಾದವು. ಹೀಗೆಯೇ ವ್ಯಂಗ್ಯ ಮತ್ತು ನೀತಿಬೋಧಕ ಕವನಗಳೂ ಹೊರಬಂದವು. ಸ್ಮಿಲ್ ಫ್ಲಾಸ್ಕಾ (1349-1403) ಬರೆದ ರಾಜಕೀಯ ರೂಪಕ ಒಂದು ವಿಶಿಷ್ಟ ಕೃತಿ. ದೊರೆಯ ಅಧಿಕಾರದ ವಿರುದ್ಧ ಬೊಹೀಮಿಯಾದ ಶ್ರೀಮಂತ ವರ್ಗದ ಹಕ್ಕುಗಳನ್ನು ಪ್ರತಿಪಾದಿಸುವುದೇ ಇದರ ವಿಷಯ. ಇದೇ ರೀತಿಯ ಸಾಮಾಜಿಕ ಕಾಳಜಿ ತಾಮಸ್ ಸ್ವಿಟ್ನಿಯ ನೀತಿಬೋಧಕ ಗದ್ಯ ಬರೆವಣಿಗೆಗಳಲ್ಲೂ ವ್ಯಕ್ತವಾಗಿದೆ. 14ನೆಯ ಶತಮಾನದ ಕೊನೆಯಲ್ಲಿ ಬಂದ ಸಾಹಿತ್ಯದಲ್ಲಿ ಸಾಮಾಜಿಕ ಮತ್ತು ನೈತಿಕ ವಿಷಯಗಳಿಗೆ ಹೆಚ್ಚು ಗಮನ ನೀಡಲಾಯಿತು. ಈ ಹೊತ್ತಿಗೆ ಜಾನ್‍ಹಸ್ (1370-1418) ಪ್ರಾರಂಭಿಸಿದ ಧಾರ್ಮಿಕ ಸುಧಾರಣಾ ಚಳವಳಿಯ ಪರಿಣಾಮವಾಗಿ ಚೆಕ್ ಲೇಖಕರ ಗಮನ ಬಹುಮಟ್ಟಿಗೆ ವಾಸ್ತವಿಕ ಮತ್ತು ವಿವಾದಾತ್ಮಕ ವಿಷಯಗಳಿಗೆ ಮೀಸಲಾಯಿತು. ಹಸ್ ದೇಶೀಯ ಭಾಷೆಯಲ್ಲಿ ನೀಡಿದ ಉಪದೇಶಗಳು ಮತ್ತು ಅವನು ಬರೆದ ಪತ್ರಗಳು ಅತ್ಯಂತ ಸರಳ ಶೈಲಿಯವಾಗಿದ್ದವು. ಇವುಗಳಿಂದ ಪ್ರಭಾವಿತರಾದ ಹಸ್‍ನ ಅನುಯಾಯಿಗಳು ರಚಿಸಿದ ಸ್ತೋತ್ರಗಳು ಅತ್ಯಂತ ಹೃದಯಸ್ಪರ್ಶಿಯಾಗಿವೆ.
ಹಸ್ ಅನಂತರ ಬಂದ ಲೇಖಕರಲ್ಲಿ ಅತ್ಯಂತ ಮೇಧಾವಿಯಾದ ಪೀಟರ್ ಚೆಲ್‍ಸಿಕಿ (1390-1460). ತನ್ನ ಕ್ರಾಂತಿಕಾರಕ ಸಾಮಾಜಿಕ ಚಿಂತನೆಗಳನ್ನೂ ಯುದ್ಧ ವಿರುದ್ಧದ ಅಭಿಪ್ರಾಯಗಳನ್ನೂ ಪ್ರಬಂಧಗಳಲ್ಲಿ ಹೊರಗೆಡಹಿದ. ಈತನ ಬರೆಹಗಳಿಂದ ಸ್ಫೂರ್ತಿ ಪಡೆದ ಬೊಹೀಮಿಯನ್ ಬ್ರದರನ್ ಎಂಬ ಗುಂಪು ಮುಂದಿನ ಎರಡು ಶತಮಾನಗಳ ಕಾಲ ದೇಶೀಯ ಚೆಕ್ ಭಾಷೆಯಲ್ಲಿ ಸಾಹಿತ್ಯ ನಿರ್ಮಾಣಕ್ಕೆ ಉತ್ತೇಜನ ನೀಡಿತು.

16ನೆಯ ಶತಮಾನದಲ್ಲಿ ದೇಶೀಯ ಭಾಷೆಯ ಕಾವ್ಯಕ್ಷೇತ್ರದಲ್ಲಿ ಯಾವ ಹೊಸ ಚೈತನ್ಯವೂ ಕಾಣಲಿಲ್ಲ. ನೀತಿಬೋಧೆಗೂ ವಿದ್ವತ್ತಿಗೂ ಪ್ರಾಶಸ್ತ್ಯ ನೀಡಿದ ಗದ್ಯ ಸಾಹಿತ್ಯವೇ ಹೇರಳವಾಗಿದೆ. ಮಾರ್ಕೊಪೋಲೋನ ಮಿಲಿಯನ್ ಎಂಬ ಕೃತಿಯ ಅನುವಾದದಿಂದ ಉತ್ತೇಜನಗೊಂಡು ಅನೇಕ ಲೇಖಕರು ಪ್ರವಾಸ ಸಾಹಿತ್ಯವನ್ನು ರಚಿಸಿದರು.

ಚೆಕ್ ಗದ್ಯದ ಬೆಳೆವಣಿಗೆಯ ಪೂರ್ಣಫಲ ದೊರೆತದ್ದು ವಿದ್ವಾಂಸರ ತಂಡವೊಂದು ಕೈಗೊಂಡ ಬೈಬಲ್ ಅನುವಾದದಿಂದ (1579-93). ಈ ಕೃತಿಯ ಭಾಷೆ ಅಭಿಜಾತ ಚೆಕ್ ಶೈಲಿಗೆ ಮಾದರಿಯಾಯಿತು. ಈ ಹೊತ್ತಿಗೆ ಡೇನಿಯಲ್ ಆಡಮ್ ಜûಡ್ ವೆಲಿಸ್ಲಾವಿನ (1545-99) ಎಂಬ ವಿದ್ವಾಂಸ ರಚಿಸಿದ ನಿಘಂಟುಗಳಲ್ಲಿ ಚೆಕ್ ಭಾಷೆಗೆ ಸುವ್ಯವಸ್ಥಿತ ರೂಪ ಬಂತು : ಅಲ್ಲಿಯವರೆಗೂ ಬೆಳೆದು ಬಂದಿದ್ದ ಚೆಕ್ ಸಾಹಿತ್ಯ ಕೃತಿಗಳ ಪರಂಪರೆಯ ಸಂಪತ್ತನ್ನು ಆತ ಬೆಳಕಿಗೆ ತಂದ. 1620ರಲ್ಲಿ ನಡೆದ ಕದನದಲ್ಲಿ ಪ್ರಾಟೆಸ್ಟಂಟ್ ಪಂಥದ ಬೊಹೀಮಿಯನ್ ಪಡೆಗಳಿಗೆ ಸೋಲಾಯಿತು. ಅದರ ಪರಿಣಾಮವಾಗಿ ಹಳೆಯ ಶ್ರೀಮಂತ ವರ್ಗವೇ ನಿರ್ಮೂಲಗೊಂಡಿತು. ಅದರ ಸ್ಥಾನದಲ್ಲಿ ಬಂದ ಹೊಸಬರಿಗೆ ಚೆಕ್ ಭಾಷೆಯ ತಿಳುವಳಿಕೆಯೇ ಇರಲಿಲ್ಲ. ಪ್ರಾಟೆಸ್ಟಂಟ್ ಪ್ರಭಾವದಿಂದ ರೂಪುಗೊಂಡಿದ್ದ ಎರಡು ಶತಮಾನಗಳ ಸಾಹಿತ್ಯ ಪರಂಪರೆಗೆ ಮುಟ್ಟುಗೋಲು ಹಾಕಲಾಗಿತ್ತು. ಅದು ಜೀವಂತವಾಗಿ ಉಳಿದಿದ್ದು ವಲಸೆ ಹೋದ ಲೇಖಕರಲ್ಲಿ ಮಾತ್ರ. ಆ ಪೈಕಿ ಜಾನ್ ಆಮೋಸ್ ಕೊಮೆನ್‍ಸ್ಕಿ (1592-1670) ಅತ್ಯಂತ ಪ್ರಸಿದ್ಧನಾದವ. ಚೆಕ್ ಭಾಷೆಯಲ್ಲಿ ಅವನು ರಚಿಸಿದ ಕೃತಿಗಳು ಅವನನ್ನು ಮಹಾ ಮೇಧಾವಿ ಎಂದು ತೋರಿಸುತ್ತವೆ. ಅವನ ಲ್ಯಾಬಿರಿಂತ್ ಆಫ್ ದಿ ವಲ್ರ್ಡ್ ಅಂಡ್ ಪ್ಯಾರಡೈಸ್ ಆಫ್ ದಿ ಹಾರ್ಟ್ ಎಂಬ ಕೃತಿ ಚೆಕ್ ಗದ್ಯ ಸಾಹಿತ್ಯದಲ್ಲಿ ಮೇರುಕೃತಿಯೆಂದು ಹೆಸರು ಪಡೆದಿದೆ.

ಕ್ಯಾಥೊಲಿಕ್ ಪಂಥದ ಸಾಹಿತ್ಯಕ್ಕೆ ದೇಶದೊಳಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯಿತು. ಅದು ಮುಖ್ಯವಾಗಿ ಸಂತರ ಚರಿತ್ರೆ, ಭಕ್ತ ಸಾಹಿತ್ಯ, ಧಾರ್ಮಿಕ ಕಾವ್ಯ ಮತ್ತು ಸ್ತೋತ್ರಗಳನ್ನು ಒಳಗೊಂಡಿತ್ತು. ಬೆಡ್ರಿಚ್ ಬ್ರೈಡೆಲ್ (1619-1680) ಬರೆದ ಕಾವ್ಯ ಉನ್ನತ ಮಟ್ಟದ್ದು ಎಂದು ಪರಿಗಣಿಸಲಾಗಿದೆ.

ಲ್ಯಾಟಿನ್ ಭಾಷೆಯಲ್ಲಿ ಬರೆದವರ ಪೈಕಿ ಜೆಸೂಯಿಟ್ ಪಂಥಕ್ಕೆ ಸೇರಿದ ಬೊಹುಸ್ಲಾವ್ ಬಾಲ್ಬಿನ್ (1621-88) ಅಗ್ರಗಣ್ಯ. ಈತ ಉಜ್ವಲ ದೇಶಭಕ್ತಿಯಿಂದ ಪ್ರೇರಣೆಗೊಂಡು ತನ್ನ ದೇಶದ ಗತಕಾಲವನ್ನು ಕುರಿತ ಅಧ್ಯಯನಗಳನ್ನೂ ಚೆಕ್ ಭಾಷೆಯ ಸಮರ್ಥನೆಯನ್ನೂ ಪ್ರಕಟಿಸಿದ. 18ನೆಯ ಶತಮಾನದ ಮೊದಲಲ್ಲಿ ಚೆಕ್ ಭಾಷೆಯನ್ನು ಶ್ರೇಷ್ಠ ಮಟ್ಟದ ಸಾಹಿತ್ಯ ರಚನೆಗೆ ಬಳಸುವುದನ್ನು ನಿಲ್ಲಿಸಲಾಗಿತ್ತು. ಆದರೂ ನಗರಗಳ ಬಡಜನರ ಮತ್ತು ಹಳ್ಳಿಗಳ ರೈತರ ಮನೋರಂಜನೆಗೋಸ್ಕರ ಒರಟು ಶೈಲಿಯ ದೇಶೀಯ ನಾಟಕಗಳು ಹಾಗೂ ಜನಪದ ಕಥೆಗಳೂ ಲಾವಣಿಗಳೂ (ಚ್ಯಾಪ್ ಬುಕ್ಸ್) ರಚಿತವಾಗುತ್ತಿದ್ದವು. ಈ ಹೊತ್ತಿಗೆ ಬಡರೈತರಲ್ಲಿ ಹೊಗೆಯಾಡುತ್ತಿದ್ದ ಅತೃಪ್ತಿಯನ್ನು ಹೊರಗೆಡಹುವ ಪದ್ಯಗಳೂ ಜಾನಪದಗಳೂ ಭಾವಗೀತೆಗಳೂ ಜನಪ್ರಿಯವಾದುವು.
ಚೆಕ್ ಭಾಷೆಗೆ ಹೊಸ ಚೈತನ್ಯವನ್ನೂ ಸ್ವರೂಪವನ್ನೂ ಕೊಟ್ಟವ ಜೋಸೆಫ್ ಡೊಬ್ರೊವ್‍ಸ್ಕಿ. ಇವನು ಚೆಕ್ ಭಾಷೆಯ ಸ್ವರೂಪವನ್ನು ನಿರ್ಣಯಿಸಿ ಕ್ರೋಢೀಕರಿಸಿದ. ರಾಜಾಶ್ರಯದಿಂದ ದೊರೆತ ವಿರಾಮವನ್ನು ಡೊಬ್ರೊವ್‍ಸ್ಕಿ ಮಧ್ಯಯುಗದ ಮತ್ತು ಪುನರುಜ್ಜೀವನ ಕಾಲದ ಚೆಕ್ ಸಾಹಿತ್ಯದ ಕೂಲಂಕಷ ಅಧ್ಯಯನಕ್ಕೆ ಮೀಸಲಿಟ್ಟ. ಈತ ಒಂದು ವ್ಯಾಕರಣವನ್ನು ರಚಿಸಿ ಚೆಕ್ ಭಾಷೆಯ ನಿರ್ದಿಷ್ಟ ಪ್ರಯೋಗಕ್ಕೆ ಮಾರ್ಗದರ್ಶನ ನೀಡಿದ. ಹಳೆಯ ಚೆಕ್ ಸಾಹಿತ್ಯ ಚರಿತ್ರೆಯಲ್ಲಿ ಕಣ್ಮರೆಯಾಗಿದ್ದ ಒಳ್ಳೆಯ ಬರೆಹಗಾರರ ಮಾದರಿಗಳನ್ನೂ ಬೆಳಕಿಗೆ ತಂದ. ಆಂಟೋನಿನ್ ಜಿರೋಸ್ಲಾವ್ ಪುಕ್‍ಮಜೆ (1769-1820) ಚೆಕ್ ಭಾಷೆಗೆ ಪುನರುಜ್ಜೀವನ ಕೊಟ್ಟವರಲ್ಲಿ ಇನ್ನೊಬ್ಬ ಮುಖ್ಯವ್ಯಕ್ತಿ. 18ನೆಯ ಶತಮಾನದ ಸಾಮಾಜಿಕ ಮತ್ತು ರಾಜಕೀಯ ಬೆಳೆವಣಿಗೆಗಳು ಚೆಕ್ ಸಾಹಿತ್ಯವನ್ನು ಆಸಕ್ತಿಯಿಂದ ಓದುವ ಓದುಗರನ್ನು ನಿರ್ಮಿಸಿದವು. ಜೋಸೆಫ್ ಯುಂಗ್‍ಮನ್ ಎಂಬಾತ ಮಿಲ್ಟನ್‍ನ ಪ್ಯಾರಡೈಸ್ ಲಾಸ್ಟ್ ಮಹಾಕಾವ್ಯದ ಅನುವಾದದಿಂದಲೂ (1811) ಅತ್ಯಂತ ಮಹತ್ತ್ವಪೂರ್ಣವಾದ ಚೆಕ್-ಜರ್ಮನ್ ನಿಘಂಟಿನಿಂದಲೂ ತನ್ನ ಭಾಷೆಯನ್ನು ಶ್ರೀಮಂತಗೊಳಿಸಿದ. ಭಾಷಾಶಾಸ್ತ್ರಜ್ಞನೂ ಪ್ರಾಚೀನ ಶೋಧಕನೂ ಆಗಿದ್ದ ಪವೆಲ್ ಜೋಸೆಫ್ ಸಫ್ರಿಕ್ (1795-1861) ಮತ್ತು ಮೊರೇವಿಯನ್ ಚರಿತ್ರಕಾರ ಫ್ರಾಂಟೆಸೆಕ್ ಪಲಾಕಿ (1798-1876) ಇವರಿಬ್ಬರೂ ಚೆಕ್ ರಾಷ್ಟ್ರೀಯ ಸಂಸ್ಕøತಿಯ ಪುನರುಜ್ಜೀವನಕ್ಕಾಗಿ ಸಕ್ರಿಯವಾಗಿ ದುಡಿದ ಉದ್ದಾಮಪಂಡಿತರು. ಇವರು ಬರೆದ ಬೊಹೀಮಿಯ ಮತ್ತು ಮೊರೇವಿಯ ಚರಿತ್ರೆ ಅಭಿಜಾತ ಚೆಕ್ ಶೈಲಿಯ ಮೇರುಕೃತಿಯೆಂದು ಪ್ರಸಿದ್ಧಿಯಾಗಿದೆ.

19ನೆಯ ಶತಮಾನದ ಆದಿಭಾಗದಲ್ಲಿ ಪುನರುಜ್ಜೀವನಗೊಂಡ ಚೆಕ್ ಭಾಷೆಯಲ್ಲಿ ರಚಿತವಾದ ದಿ ಡಾಟರ್ ಆಫ್ ಸ್ಲಾವಾ ಎಂಬ ಪ್ರಸಿದ್ಧರೂಪಕ ಸಾನೆಟ್ ಮಾಲೆಯನ್ನು ಬರೆದವನ ಜಾನ್ ಕೊಲ್ಲಾರ್ (1793-1852). ಈ ಕವನ ಮಾಲೆಯಲ್ಲಿ ಎದ್ದು ಕಾಣುವುದು ತನ್ನ ರಾಷ್ಟ್ರದ ಉಜ್ವಲಭವಿಷ್ಯದ ಬಗ್ಗೆ ಕವಿ ತಾಳಿದ ಆಶಾಭಾವನೆ. ಫ್ರಾಂಟಿಸೆಕ್ ಲಾಡಿಸ್ಲಾವ್ ಸೆಲಕೋವ್‍ಸ್ಕಿ (1790-1852) ಬರೆದ ಲಾವಣಿಗಳಲ್ಲಿ ಜಾನಪದದ ಬನಿಯೂ ಸೊಗಡೂ ಇವೆ. ಜೋಸೆಫ್ ಕಜೆಟನ್ ಟಿಗ್ಸ್ (1808-56) ಮತ್ತು ವಾಕ್ಲಾವ್ ಕ್ಲಿಮೆಂಟ್ ಕ್ಲಿಕ್‍ಪೀರಾ (1792-1859) ಬರೆದ ನಾಟಕಗಳು ಚೆಕ್ ಪರಂಪರೆಯನ್ನು ಸ್ಥಾಪಿಸಿದುವು. ಚೆಕ್ ಕವಿಗಳಲ್ಲೆಲ್ಲ ಅತ್ಯಂತ ಶ್ರೇಷ್ಠವಾದ ಕೆರೆಲ್ ಹೈನೆಕ್ ಮಾಚಾ ರೋಮ್ಯಾಂಟಿಕ್ ಸಂಪ್ರದಾಯಕ್ಕೆ ಸೇರಿದವ. ಆತ ಬರೆದ ಮಾಜ್ ಎಂಬ ಕೃತಿ ಭಾವಗೀತೆಯ ಮಹಾಕಾವ್ಯವೆಂದು ಹೆಸರು ಪಡೆದಿದೆ. ಈ ಕೃತಿಯಲ್ಲಿ ಇಂಗ್ಲೆಂಡಿನ ಬೈರನ್, ಸ್ಕಾಟ್ ಕವಿಗಳ ಹಾಗೂ ಪೋಲೆಂಡಿನ ರೊಮ್ಯಾಂಟಿಕ್ ಸಂಪ್ರದಾಯದ ಬರೆಹಗಾರರ ಪ್ರಭಾವ ಬಾಹ್ಯರೂಪದ ಕೆಲವು ಅಂಶಗಳಲ್ಲಿ ಕಂಡುಬರುತ್ತದೆ. ಈ ಕೃತಿಯಲ್ಲಿ ಕವಿ ಬಾಳನ್ನು ಕುರಿತು ಮಾಡಿರುವ ಚಿಂತನೆಗಳಲ್ಲಿ ತನ್ನ ನಿರಾಶಾಭಾವನೆಯನ್ನು ವ್ಯಕ್ತಪಡಿಸಿದ್ದಾನೆ.

1840ರ ಅನಂತರ ರೊಮ್ಯಾಂಟಿಕ್ ಸಂಪ್ರದಾಯದ ವಿರುದ್ಧ ಮೂಡಿಬಂದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದವರಲ್ಲಿ ಕರೆಲ್ ಹ್ಯಾವ್ಲಿಸೆಕ್ ಬರೋವ್‍ಸ್ಕಿ (1821-1856) ಮತ್ತು ಬೋಜೇನ ನೆಮ್‍ಕೋವಾ (1820-82) ಮುಖ್ಯರು. ಇವರ ಆಸಕ್ತಿ ವ್ಯಾವಹಾರಿಕ ವಿಷಯಗಳಲ್ಲಿ ಹೆಚ್ಚಾಗಿತ್ತೇ ಹೊರತು ನಾಡಿನ ಗತಕಾಲದ ವೈಭವ ಅಥವಾ ಭವಿಷ್ಯದ ಮಹಿಮೆಯ ಬಗ್ಗೆ ಕನಸು ಕಾಣುತ್ತ ಕಲ್ಪನಾಲೋಕದಲ್ಲಿ ವಿಹರಿಸುವಂಥದಲ್ಲ. ಇವರಿಬ್ಬರೂ ಚೆಕ್ ಗದ್ಯಶೈಲಿಯ ಪ್ರಯೋಗದಲ್ಲಿ ಕುಶಲರಾಗಿದ್ದರಲ್ಲದೆ ಚೆಕ್ ಭಾಷೆಯನ್ನು ನಿತ್ಯಬಳಕೆಯ ಭಾಷೆಯ ಮಟ್ಟಕ್ಕೆ ತಂದರು. ಬೊeóÉೀನ ನೆಮ್‍ಕೋವಾ ಚೆಕ್ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದವರಲ್ಲಿ ಮೊದಲ ಮಹಿಳೆ. ಆದರ್ಶ ಕಲ್ಪನೆಯಿಂದಲೂ ವಾಸ್ತವಿಕ ವಿವರಗಳಿಂದಲೂ ಕೂಡಿದ ಈಕೆ ಬರೆದ ಗ್ರಾಂಡ್‍ಮದರ್ ಎಂಬ ಕೃತಿ ಹಳ್ಳಿ ಜೀವನ ಚಿತ್ರಗಳನ್ನು ಕೊಡುವುದರಲ್ಲಿ ಯಶಸ್ವಿಯಾಗಿದೆ. ಜಾನ್ ನೆರೂಡ ಎಂಬಾತ ವೃತ್ತಪುಟದ ಕೆಳಭಾಗದಲ್ಲಿ ಪ್ರಕಟವಾಗುತ್ತಿದ್ದ 'ಫಯ್ಯುಟಾನ್ ಎಂಬ ಹೊಸ ಬಗೆಯ ಗದ್ಯಶೈಲಿಯ ಶಿಲ್ಪಿ. ಆತ ಭಾವಗೀತೆಯ ಸಮರ್ಥ ಕವಿಯೂ ಆಗಿದ್ದ. ಅವನ ಕವನಗಳಲ್ಲಿ ರಾಜಕೀಯ ಮತ್ತು ರಾಷ್ಟ್ರೀಯ ಪ್ರಜ್ಞೆ ಹೆಚ್ಚಾಗಿ ಮೂಡಿ ಬಂದಿದೆ. ನೆರೂಡನ ಸಮಕಾಲೀನವಾದ ವಿಟೆeóïಸ್ಲಾವ್ ಹಲೆಕ್ ಎಂಬಾತ ಮಾಜ್ ಎಂಬ ಹೆಸರಿನ ಹೊಸ ಸುಧಾರಣಾ ಚಳವಳಿಯ ಮುಖಂಡನಾದ (ಮಾಜ್ ಎಂಬುದು ಹಲೆಕ್ ಮತ್ತು ನೆರೂಡ ಸಂಪಾದಿಸುತ್ತಿದ್ದ ಪತ್ರಿಕೆಯ ಹೆಸರು). ಈ ಗುಂಪಿಗೆ ಸೇರಿದ ಪ್ರಮುಖ ಕಾದಂಬರಿಕಾರಳು ಕ್ಯಾರೋಲಿನಾ ಸ್ವೆಟ್ಲಾ 19ನೆಯ ಶತಮಾನದಲ್ಲಿ ಸ್ತ್ರೀಯರ ಸ್ಥಾನವನ್ನು ಕುರಿತು ಮುಖ್ಯವಾಗಿ ನೈತಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ತನ್ನ ಕಾದಂಬರಿಗಳಲ್ಲಿ ವಿವೇಚಿಸಿದ್ದಾಳೆ. ರೂಚ್ ಎಂಬ ನಿಯತಕಾಲಿಕ ಪತ್ರಿಕೆಯಲ್ಲಿ 1870-80ರ ದಶಕದಲ್ಲಿ ಬರೆಯುತ್ತಿದ್ದ ಲೇಖಕರಲ್ಲಿ ಮುಖ್ಯರಾದ ಸ್ವಟೋಪ್ಲುಕ್‍ಚೆಕ್ ಮತ್ತು ಅಲಾಯ್ಸ್ ಜಿರಾಸೆಕ್ ಎಂಬುವರು ತಮ್ಮ ಭಾವಗೀತೆ, ಮಹಾಕಾವ್ಯ ಹಾಗೂ ಕಾದಂಬರಿಗಳಲ್ಲಿ ರಾಷ್ಟ್ರೀಯ ಪ್ರಜ್ಞೆಗೆ ಹೊಸರೂಪ ಕೊಟ್ಟರು. ಲುಮೀರ್ ಹೆಸರಿನ ಇನ್ನೊಂದು ಪ್ರಭಾವಶಾಲೀ ಲೇಖಕರ ಗುಂಪಿನ ಮುಖ್ಯಸ್ಥರಾಗಿದ್ದ ಕವಿಗಳು ಜರಾಸ್ಲಾವ್ ವ್ರಿಚ್‍ಲಿಕಿ ಮತ್ತು ಜೂಲಿಯಸ್ ಜೆಯೆರ್. ಇವರ ಕೃತಿಗಳಲ್ಲಿ ತಮ್ಮ ರಾಷ್ಟ್ರಕ್ಕೆ ಮಾತ್ರ ಸೀಮಿತಗೊಳ್ಳದ ವಿಶಾಲದೃಷ್ಟಿಯೂ ರಸಜ್ಞತೆಯೂ ವಿಶೇಷವಾಗಿ ವ್ಯಕ್ತವಾಗುತ್ತವೆ.

ಆಧುನಿಕ ಚೆಕ್ ಸಾಹಿತ್ಯ ಈ ಕಾಲಕ್ಕೆ ಚೆನ್ನಾಗಿ ಮೈಗೂಡಿತ್ತು. ತನ್ನದೇ ಆದ ಹೊಸ ಕಾವ್ಯಭಾಷೆಯೂ ಗದ್ಯಶೈಲಿಯ ಪರಂಪರೆಯೂ ನಿರ್ಮಾಣವಾಗಿತ್ತು. 1890ರಿಂದೀಚೆಗೆ ವಿಶಾಲ ಚೆಕ್ ಸಾಹಿತ್ಯ ಯೂರೋಪ್ ಸಾಹಿತ್ಯಕ್ಕೆ ಜೊತೆಜೊತೆಯಾಗಿ ಬೆಳೆದುಬಂದಿತ್ತು. ಮ್ಯಾಸಿರಿಕ್ ಎಂಬುವನ ಚಿಂತನೆಗೂ ಮಚಾರ್‍ನ ಕಾವ್ಯವೂ ಈ ದಿಶೆಯಲ್ಲಿ ಮುಖ್ಯವಾದುವು. ಯಾವುದನ್ನೂ ಪರೀಕ್ಷೆ ಮಾಡದೆ ಒಪ್ಪದಂಥ ಸಂದೇಹವಾದವು ರೊಮ್ಯಾಂಟಿಕ್ ಸಂಪ್ರದಾಯಕ್ಕೆ ವಿರುದ್ಧವಾದ ನಿಲವೂ ಇವರ ಕೃತಿಗಳಲ್ಲಿ ಕಾಣಬರುವುವು.

20ನೆಯ ಶತಮಾನದ ಪ್ರಾರಂಭದಲ್ಲಿ ಪ್ರಸಿದ್ಧಿಗೆ ಬಂದ ಅತ್ಯಂತ ಶ್ರೇಷ್ಠ ಚೆಕ್ ಕವಿ ಪೀಟರ್ ಬೆeóïಕುಕ್ ಉತ್ಕಟ ನಿರಾಶಾವಾದದಿಂದ ತನ್ನದೇ ಆದ ವೈಯಕ್ತಿಕ ತತ್ತ್ವಸಿದ್ಧಾಂತವನ್ನು ಸ್ವಚ್ಛಂದ ಛಂದಸ್ಸುಗಳಲ್ಲಿ ಹೊರಗೆಡಹಿದ. ಅನಂತರ ಬಂದ ಅನೇಕ ಕವಿಗಳಲ್ಲಿ ಇದರ ಮರುದನಿ ಕೇಳಿಬರುತ್ತದೆ. ಅನಂತರ ಬಂದ ಅನೇಕ ಸಮರ್ಥ ಕವಿಗಳು ಮುಖ್ಯವಾಗಿ ಆ್ಯಂಟೊನಿನ್ ಸೊವಾ ಫ್ರನಾಸ್ರಮೆಕ್ ಮತ್ತು ನ್ಯೂಮಾನ್ ಎಂಬುವರು ಭಾವಗೀತೆಯಲ್ಲಿ ಹೆಚ್ಚಿನ ಪ್ರಯೋಗ ನಡೆಸಿದರು. ಮೊದಲ ಮಹಾಯುದ್ಧ ಮುಗಿದಮೇಲೆ ಸಮಾಜ ಮತ್ತು ಸಮತಾವಾದಗಳಿಂದ ಸ್ಫ್ಪೂರ್ತಿಗೊಂಡ ಭಾವಗೀತೆಗಳು ಹೆಚ್ಚಾಗಿ ರಚಿತವಾದವು. ಈ ಬಗೆಯ ಭಾವಗೀತೆಗಳನ್ನು ಬರೆದವರಲ್ಲಿ ಮುಖ್ಯರಾದವರು ಜಿರಿಲ್ ವೋಲ್ಕರ್ ಮತ್ತು ಜೋಸೆಫ್ ಹೋರ. ಇದರ ಜೊತೆಜೊತೆಯಲ್ಲಿಯೆ ಅನೇಕ ಕವಿಗಳು ಸರ್‍ರಿಯಲಿಸ್ಟ್ ತಂತ್ರಗಳನ್ನು ಬಳಸಿದರು. ಈ ಪೈಕಿ ಬಹಳ ಹೆಸರುಪಡೆದ ಕವಿ ವಿಟೆeóïಸ್ಲಾವ್ ನೆeóïವಾಲ್.

ಎರಡನೆಯ ಮಹಾಯುದ್ಧ ಮತ್ತು ಮ್ಯೂನಿಕ್ ಪ್ರಕರಣಗಳ ಪರಿಣಾಮವಾಗಿ ಅನೇಕ ಭಾವಗೀತೆಯ ಕವಿಗಳು ಮತ್ತೊಮ್ಮೆ ಸಾಂಪ್ರದಾಯಿಕ ಶೈಲಿ ಹಾಗೂ ರಾಷ್ಟ್ರೀಯ ಮನೋಭಾವದ ವಸ್ತುಗಳ ಕಡೆ ಗಮನವಿತ್ತರು. ಇವರ ಪೈಕಿ ನೈeóïವಾಲ್ ಮತ್ತು ಹೋರಾ ಎಂಬುವರು ಮುಖ್ಯರಾದವರು.

1918ರ ಮುನ್ನ ಕೇಪೆಕ್ಸ್ ಜೋಡ್ ಎಂಬಾತ ಸಾಮಾಜಿಕ ಕಾದಂಬರಿ ಮತ್ತು ಸಣ್ಣಕಥೆಗಳನ್ನು ಸತ್ವಯುತವಾಗಿ ಬರೆಯುವುದರಲ್ಲಿ ಯಶಸ್ವಿಯಾದ. ಅನಂತರ ಕವೇಲ್ ಕೇಪೆಕ್ ತನ್ನ ಚಿಂತನಶೀಲ ಕಾದಂಬರಿ ಮತ್ತು ಸಣ್ಣಕಥೆಗಳ ಮೂಲಕ ಚೆಕ್ ಗದ್ಯಶೈಲಿಯನ್ನು ಹೆಚ್ಚು ಪರಿಪಕ್ವಗೊಳಿಸಿ ಆಡುಮಾತಿನ ಬಳಕೆಯಿಂದ ಭಾಷೆಗೆ ಒಂದು ಹೊಸ ಸತ್ವ ಕೊಟ್ಟ. ಭಾಷೆಯನ್ನು ಇಷ್ಟೇ ಶ್ರೀಮಂತಗೊಳಿಸಿದ ಇನ್ನೊಬ್ಬ ಲೇಖಕ ವ್ಲಾಡಿಸ್ಲಾವ್ ವಾಂಕೂರ. ರುತೇನಿಯ ಪ್ರದೇಶದ ಜನಗಳ ಕಷ್ಟಕಾರ್ಪಣ್ಯಗಳನ್ನು ವಿವರಿಸುವ ಕೃತಿಗಳನ್ನು ಬರೆದ ಇನ್ನೊಬ್ಬ ಮುಖ್ಯ ಕಾದಂಬರಿಕಾರ ಐವಾನ್ ಓಲ್‍ಬ್ರಾಕ್ಟ. ಎಲ್ಲರಿಗಿಂತ ಮಿಗಿಲಾಗಿ ಕಾರ್ಮಿಕರ ಜೀವನ ಮತ್ತು ಹೋರಾಟವನ್ನು ಕುರಿತು ಬರೆದ ಮರೀ ಮಾಜೆರೋವಾ ಅತ್ಯಂತ ಖ್ಯಾತಿವೆತ್ತ ಕಾದಂಬರಿಕಾರ. ಈತ ಆಮೇಲೆ ಬಂದ ವಾಸ್ತವಿಕ ದೃಷ್ಟಿಯ ಸಮಾಜವಾದೀ ಬರೆಹಗಾರರ ಮುಂಚೂಣಿಯಾದ.

ಚೆಕ್ ನಾಟಕ ಪ್ರಾರಂಭವಾದದ್ದು ರಾಷ್ಟ್ರೀಯ ಪುನರುಜ್ಜೀವನದ ಚಳವಳಿಯ ಕಾಲದಲ್ಲಿ ಅವು ಬಹುಮಟ್ಟಿಗೆ ಹೊರದೇಶಗಳಲ್ಲಿ ರಚಿತವಾಗಿದ್ದ ನಾಟಕಗಳ ಮಾದರಿಯಲ್ಲಿದ್ದವು. ಅಲ್ಲದೆ ಕಾವ್ಯ, ಕಾದಂಬರಿ ಸಣ್ಣಕಥೆಯ ಮಟ್ಟಕ್ಕೆ ನಾಟಕ ಏರಲಿಲ್ಲ. 1918ರ ಅನಂತರ ಫ್ರಾಂಟಿಸೆಕ್ ಲಾನ್‍ಜೆರ್ ಮತ್ತು ಕೆರೇಲ್ ಕೇಪೆಕ್ ಎಂಬುವರು ಕೃತಿಗಳಲ್ಲಿ ನಾಟಕ ಒಂದು ಹೊಸ ವರ್ಚಸ್ಸನ್ನು ಪಡೆಯಿತು. ಬಹುಮಟ್ಟಿಗೆ ಇವರ ನಾಟಕಗಳು ಆದರ್ಶದೃಷ್ಟಿಯ ಮತ್ತು ವಿಡಂಬನಾತ್ಮಕ ನಾಟಕಗಳು. ಜೆರೊಸ್ಲಾವ್ ವ್ರಿಕ್‍ಲಿಕಿ ಎಂಬ ನಾಟಕಕಾರನು ಷೇಕ್ಸ್‍ಪಿಯರ್, ಗಯಟೆ ಮೊದಲಾದವರ ಕೃತಿಗಳನ್ನು ಅನುವಾದ ಮಾಡಿದ್ದು ಒಂದು ವಿಶೇಷ ಸಾಧನೆ. ಎರಡನೆಯ ಮಹಾಯುದ್ಧಾನಂತರದ ರಾಜಕೀಯ ವಿಪ್ಲವದ ಫಲವಾಗಿ 1948ರ ಬಳಿಕ ಚೆಕ್ ಸಾಹಿತ್ಯ ನಿರ್ಮಾಣದಲ್ಲಿ ಮಾಕ್ರ್ಸ್ ಕ್ರಾಂತಿಕಾರಕ ತತ್ತ್ವಗಳಿಗೆ ಅನುಗುಣವಾಗಿ ಸಾಹಿತ್ಯ ನಿರ್ಮಾಣ ಮಾಡುವ ಧೋರಣೆ ರೂಪುಗೊಂಡಿತು. ಶ್ರೀಮಂತವರ್ಗದ ಶೋಷಣೆಯನ್ನು ಪ್ರತಿಭಟಿಸುವ ಹಾಗೂ ಕಾರ್ಮಿಕ ಮತ್ತು ರೈತ ವರ್ಗಗಳ ಹೋರಾಟದ ಮೂಲಕವೇ ಜನತೆಯ ಉದ್ದಾರವೆಂಬ ಆದರ್ಶ ಈಚಿನ ಸಾಹಿತಿಗಳಿಗೆ ಸ್ಫೂರ್ತಿಯಾಗಿದೆ. ಅಲ್ಲದೆ ನ್ಯಾಯ, ಸಮಾನತೆಗಳ ಆಧಾರದ ಮೇಲೆ ಕಟ್ಟಬೇಕಾಗಿರುವ ಹೊಸ ಸಮಾಜನಿರ್ಮಾಣಕ್ಕೆ ಸಾಹಿತಿಗಳು ಹೊಣೆಗಾರರೆಂಬ ದೃಷ್ಟಿಯೂ ಈಚಿನ ಬರೆಹಗಾರರಲ್ಲಿ ವಿಶೇಷವಾಗಿ ಪ್ರಕಟವಾಗಿದೆ.									(ಎಸ್.ಜಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ